ಬುದ್ಧಪಾಲಿತ - 
	ನಾಗಾರ್ಜುನನ ಮಾಧ್ಯಮಿಕಪಂಥಕ್ಕೆ ಸೇರಿದ ಈತ ಕ್ರಿ.ಶ. ಐದನೆಯ ಶತಮಾನದಲ್ಲಿದ್ದವ. ಈತ ನಾಗಾರ್ಜುನನ ಗ್ರಂಥಗಳಿಗೂ ಆರ್ಯ ದೇವನ ಗ್ರಂಥಗಳಿಗೂ ವ್ಯಾಖ್ಯಾನ ಬರೆದಿದ್ದಾನೆ. ಪ್ರಾಸಂಗಿಕವೆಂಬ ಬೌದ್ಧ ಶಾಲೆಗೆ ಈತ ಪ್ರವರ್ತಕಪುರುಷನೆಂದು ಸಂಪ್ರದಾಯ ಹೇಳುತ್ತದೆ. ಇವನ ಒಡನಾಡಿಯಾಗಿದ್ದ ಭಾವವಿವೇಕ ಸ್ವತಂತ್ರ ಮಹಾಯಾನಶಾಖೆಯನ್ನು ಆರಂಭಿಸಿದ. ಇವರಿಬ್ಬರ ಗ್ರಂಥಗಳೂ ಸಂಸ್ಕøತದಲ್ಲಿ ರಚಿತವಾದುವು. ಆದರೆ ಅವು ಇಂದು ಟೆಬೆಟಿಯನ್ ಅನುವಾದಗಳಲ್ಲಿ ಮಾತ್ರ ಉಪಲಬ್ಧವಾಗಿವೆ.													
(ಎಸ್.ಕೆ.ಆರ್.)

ಪ್ರಾಸಂಗಿಕ ತತ್ತ್ವದ ವೈಶಿಷ್ಟ್ಯ ಅದರ ವಾದವಿಧಾನ. ತಮ್ಮ ಪಕ್ಷವನ್ನು ಎತ್ತಿ ಹಿಡಿಯಲು ಈ ತಾತ್ತ್ವಿಕರು ತುಂಬ ಚಮತ್ಕಾರವಾಗಿ ಪ್ರತಿಕಕ್ಷಿಗೆ ಪ್ರಶ್ನೆಗಳನ್ನೂ ಹಾಕುತ್ತಿದ್ದರು. ಅವನು ಪ್ರಶ್ನೆಗಳಿಗೆ ಯಾವ ಬಗೆಯಾದ ಉತ್ತರ ಕೊಡಲು ಪ್ರಯತ್ನಿಸಿದರೂ ಅವು ತನ್ನ ಪಕ್ಷಕ್ಕೆ ಬಾಧಕವೂ ಪರಪಕ್ಷಕ್ಕೆ ಸಾಧಕವೂ ಆಗಿ ಪರಿಣಮಿಸುತ್ತಿದ್ದುವು. ಸ್ವತಂತ್ರ ಪಕ್ಷ ಶೂನ್ಯವಾದವನ್ನು ಸ್ಥಾಪಿಸಲು ತನ್ನದೇ ಆದ ಸ್ವತಂತ್ರ ಉಪಾಯಗಳನ್ನು ನಿರ್ಮಿಸಿತು. ಇತರ ಶೂನ್ಯವಾದಿಗಳಲ್ಲಿ ಆರ್ಯವೇದ, ಶಾಂತಿದೇವ, ಶಾಂತರಕ್ಷಿತ ಮತ್ತು ಕರ್ಮಾಶೀಲ ಪ್ರಸಿದ್ಧರಾದವರು.											
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ